Monday, 16 December 2019

ಡ್ರೈವರ್ (Story of a Driver)


ಬಸ್ಸು ವೇಗವಾಗಿ ಚಲಿಸುತ್ತಿತ್ತು. ಡ್ರೈವರ್ ಏನನ್ನೋ ಜಗಿಯುತ್ತಾ, ನಿಮಿಷಕ್ಕೊಮ್ಮೆ ಉಗಿಯುತ್ತಾ ತನ್ನಷ್ಟಕ್ಕೆ ತಾನೇ ಬಸ್ಸು ಚಲಾಯಿಸುತ್ತಿದ್ದ. ಬಸ್ಸಲ್ಲಿದ್ದ ಪ್ರಯಾಣಿಕರಲ್ಲಿ ಕೆಲವರು ಸ್ಪೀಕರ್ ನಲ್ಲಿ ಕೇಳಿ ಬರುತ್ತಿದ್ದ ಸೋನು ನಿಗಮ್ ಹಾಡಿದ ಯಾವುದೋ ಕನ್ನಡ ಹಾಡನ್ನು ಆಸ್ವಾದಿಸುತ್ತಾ ಅರೆಮಂಪರಿನಲ್ಲಿದ್ದರೆ, ಇನ್ನು ಕೆಲ ಯುವಕ-ಯುವತಿಯರು ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದರು. ಎದುರಿನಲ್ಲಿ ಪೆಟ್ರೋಲ್ ಟ್ಯಾಂಕರೊಂದನ್ನು ಓವರ್ ಟೇಕ್ ಮಾಡಿ ಬರುತ್ತಿದ್ದ ಐರಾವತ ಬಸ್ಸು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಡ್ರೈವರ್ ಒಮ್ಮೆಲೇ ಬ್ರೇಕ್ ಹಾಕಿದ. ಅರೆ ಬಾಯಿ ತೆರೆದು ಅರೆ ನಿದ್ರೆಯಲ್ಲಿದ್ದವರು ಮುಂದಿನ ಸೀಟುಗಳಿಗೆ ತಲೆ ಹೊಡೆಸಿಕೊಂಡು ಎಚ್ಚರವಾಗಿ ಕೋಪದಿಂದ ಡ್ರೈವರ್ ನತ್ತ ಗೊಣಗಲಾರಂಭಿಸಿದರು. "ದಾನೆ ಅಣ್ಣಾ, ಇಂಚ ಬ್ರೇಕ್ ಪಾಡ್ ತ್, ದಾನೆ ಜನಕ್ಕುಳೆನ್ ಕೆರೊಡುಂದ್ ಉಲ್ಲನಾ? ಯಮ್ಮ! ಸೊಂಟ ಪೊಲಿಂಡ್ ಈ ಡ್ರೈವರ್ ನ ದೆಸೆಟ್! "( ಯಾಕಣ್ಣಾ, ಹೀಗೆ ಒಮ್ಮೆಲೆ ಬ್ರೇಕ್ ಹಾಕಿ, ಜನರನ್ನು ಕೊಲ್ಲಬೇಕೆಂದುಕೊಂಡಿದ್ದೀಯ? ಈ ಡ್ರೈವರ್ ನ ದೆಸೆಯಿಂದ ಸೊಂಟ ಮುರಿಯಿತು!)
                                         *****
ಏನು ಜನ ನೋಡಿ? ಅಷ್ಟೂ ಜನರ ಜೀವ ಉಳಿಸಲು ನಾನು ಬ್ರೇಕ್ ಹಾಕಿದರೂ, ಇವರು ನನ್ನತ್ತ ಗೊಣಗುತ್ತಾರೆ. ಸೊಂಟ ಮುರಿದ ಚಿಂತೆಯಲ್ಲಿ ಜೀವ ಉಳಿದ ವಿಷಯ ಇವರಿಗೆ ನೆನಪಾಗುವುದೇ ಇಲ್ಲ. ಹಾಗೆಂದು ನಾನು ಬ್ರೇಕ್ ಹಾಕದೇ ಇರುತ್ತಿದ್ದರೆ ಗೊಣಗಲು ಇವರ್‍ಯಾರೂ ಬದುಕಿರುತ್ತಿರಲಿಲ್ಲ, ಆದರೆ ಉಳಿದ ಜನರು, ಮಾಧ್ಯಮದವರು ನನ್ನ ಕಡೆಗೇ ಬೊಟ್ಟು ಮಾಡುತ್ತಿದ್ದರು! ಈ ಜನರೇ ಹೀಗೆ, ನಿಧಾನವಾಗಿ ಚಲಾಯಿಸಿದರೆ "ಯಾನ್ ಇನಿಯೇ ಪೋವೊಡ್ ಕುಡ್ಲಕ್, ಎಲ್ಲೆ ಅತ್ತ್!" ( ನಾನಿವತ್ತೇ ಹೋಗಬೇಕು ಮಂಗಳೂರಿಗೆ, ನಾಳೆ ಅಲ್ಲ!) ಎನ್ನುತ್ತಾರೆ. ಹಾಗೆಂದು ವೇಗವಾಗಿ ಹೋದರೆ "ಯಾನ್ ಕುಡ್ಲಕ್ ಪೋವೊಡಣ್ಣ, ಸ್ವರ್ಗಕ್ ಅತ್ತ್! " (ನಾನು ಮಂಗಳೂರಿಗೆ ಹೋಗಬೇಕು, ಸ್ವರ್ಗಕ್ಕೆ ಅಲ್ಲ!) ಎಂದು ಸ್ವರ್ಗದಲ್ಲಿ ಆಗಲೇ ಸೀಟು ಬುಕ್ ಮಾಡಿ ಬಂದವರಂತೆ ಹೇಳುತ್ತಾರೆ. ಬ್ರೇಕ್ ಹಾಕಿದರೂ ಸಿಡುಕುತ್ತಾರೆ, ಬ್ರೇಕ್ ಹಾಕದಿದ್ದರಂತೂ ಜೈಲಿಗೇ ಕಳುಹಿಸುತ್ತಾರೆ!
ಇವೆಲ್ಲವನ್ನೂ ಸಹಿಸಿಕೊಂಡು ಮೌನವಾಗಿ ಬಸ್ಸು ಓಡಿಸುತ್ತಾ ಒಣ ಜೀವನ ನಡೆಸುವ ’ಡ್ರೈ’ವರ್ ನಾನು. ಬಸ್ಸಲ್ಲಿ ಯಾರಾದರು ಪರಿಚಯದವರು ಸಿಕ್ಕರೆ ನಸುನಗುತ್ತಾರೆಯೇ ಹೊರತು ಮಾತನಾಡುವುದಿಲ್ಲ. ಆಗೆಲ್ಲಾ "ಬಸ್ಸು ಚಲಾಯಿಸುವಾಗ ಚಾಲಕನ ಬಳಿ ಯಾರೂ ಮಾತನಾಡಬಾರದು" ಎಂಬ ಬೋರ್ಡು ನನ್ನನ್ನು ಕೆಣಕುತ್ತಾ ಗಹಗಹಿಸಿ ನಗುತ್ತದೆ. ದಿನವೂ ಟಾರು ರಸ್ತೆಯನ್ನೇ ನೋಡಿ ಕೆಂಪಾದ ಕಂಗಳನ್ನು ತಂಪು ಮಾಡೋಣವೆಂದು ಕನ್ನಡಿಯಲ್ಲಿ ನನ್ನ ಹಿಂದಿನ ಸೀಟುಗಳಲ್ಲಿ ಕೂರುವ ಕಾಲೇಜು ಹುಡುಗಿಯರನ್ನು ನೋಡಿದರೆ, ಅವರು ಸಿಟ್ಟಾದಂತೆ ನಟಿಸುತ್ತಾ ಮುಖ ಸಿಂಡರಿಸಿ ಕಿಟಕಿಯಾಚೆ ನೋಡುತ್ತಾರೆ. B.C Road ನಲ್ಲಿ ಹತ್ತುವ ಮಹಿಳಾ ಸಂಘದ ದಡೂತಿ ಹೆಂಗಸೊಬ್ಬಳು ಒಂದು ಸೀಟಿನ ಟಿಕೆಟ್ ಪಡೆದು ಎರಡೂ ಸೀಟುಗಳನ್ನು ಆಕ್ರಮಿಸಿ, ಗಂಡಸರತ್ತ ಕಿಡಿ ಕಾರುತ್ತಾ ಉಳಿದ ಮಹಿಳೆಯರೊಂದಿಗೆ ಪಟ್ಟಾಂಗಕ್ಕಿಳಿಯುತ್ತಾಳೆ. ಬಸ್ಸಿನ ಸ್ಪೀಕರ್ Full Volumeನೊಂದಿಗೆ ಅವಳೊಡನೆ ಸ್ಪರ್ಧಿಸಿದರೂ ಕಡೆಗೆ ಸೋತು ಹೋಗುತ್ತದೆ.
ಹೀಗೆ ನನ್ನ ಜೀವನದಲ್ಲಿ ಹೇಳಿಕೊಳ್ಳುವಂತಹಾ ವಿಷಯಗಳೇನೂ ಇಲ್ಲ. ಪುತ್ತೂರಿನಿಂದ ಮಂಗಳೂರಿನವರೆಗೆ ಇರುವ ಹೊಂಡಗಳ ರಸ್ತೆಯೇ ನನ್ನ ಜೀವನ.

ಅಂದು ಎಂದಿನಂತೆ ಪುತ್ತೂರಿನಿಂದ ಜನ ತುಂಬಿಸಿಕೊಂಡು ಮಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದೆ. ಮಿತ್ತೂರು ಸಮೀಪ ಎಂದಿನಂತೆ ಆ ಕೆಂಪು ಬಣ್ಣದ ಸರ್ಕಾರಿ ಬಸ್ಸನ್ನು ಓವರ್ ಟೇಕ್ ಮಾಡಿ ಮುನ್ನಡೆದಿದ್ದೆ. ಈ ಕೆಂಪು ಬಣ್ಣದ ಹಳೆ ಸರ್ಕಾರಿ ಬಸ್ಸಿಗೆ ಒಂದು ಸ್ವಾರಸ್ಯಕರ ದಾಖಲೆಯಿದೆ. ತನ್ನ ಇತಿಹಾಸದಲ್ಲೇ ಅದು ಒಂದು ಸೈಕಲ್ ಗಾಡಿಯನ್ನು ಸಹ ಓವರ್ ಟೇಕ್ ಮಾಡಿಲ್ಲ. ಅಥವಾ ಸೈಕಲ್ ಗಾಡಿಗಳೂ ಸಹ ಈ ಕೆಂಪು ಬಸ್ಸನ್ನು ಓವರ್ ಟೇಕ್ ಮಾಡುತ್ತವೆ ಎಂದು ಹೇಳಬಹುದು. ಈ ಬಸ್ಸಿನಲ್ಲಿ ಪ್ರಯಾಣಿಸುವುದು ರಿಟೈರ್ಡ್ ಆದ ಇಳಿ ವಯಸ್ಸಿನವರು ಮಾತ್ರ.
ಈ ಕಡೆಯಿಂದ ಮಂಗಳೂರಿಗೆ ಹೋಗುವ ಬಸ್ಸುಗಳ ಮೊದಲ ಗಮ್ಯ ಕಲ್ಲಡ್ಕ. ಏಕೆಂದರೆ ಪುತ್ತೂರು, ಉಪ್ಪಿನಂಗಡಿ ಹಾಗೂ ವಿಟ್ಲದ ಕಡೆಯಿಂದ ಬರುವ ಬಸ್ಸುಗಳ ನಡುವೆ ಪ್ರಯಾಣಿಕರನ್ನು ಸೆಳೆಯಲು ಸ್ಪರ್ಧೆ ಪ್ರಾರಂಭವಾಗುವುದೇ ಅಲ್ಲಿಂದ. ನಾನು ಕಲ್ಲಡ್ಕ ತಲುಪುವ ಮೊದಲೇ ವಿಟ್ಲದಿಂದ ಬಂದ ಬಸ್ಸು ಪ್ರಯಾಣಿಕರನ್ನು ತುಂಬಿಸಿಕೊಂಡು ಏದುಸಿರು ಬಿಡುತ್ತಾ ನಿಂತಿತ್ತು. ಆ ಬಸ್ಸಿನ ಡ್ರೈವರ್ ನನ್ನನ್ನು ನೋಡಿ ಪರಿಚಯದ್ದೋ, ಕುಹಕದ್ದೋ ನಗೆ ನಕ್ಕ. ನಾನು ನಸುನಕ್ಕು ನೇರ ಮುನ್ನಡೆದೆ. "ಓ ಸೀನ, ಬೀಸ ಪೋಲ, ಮೆಲ್ಕಾರ್ ತ ಪ್ಯಾಸೆಂಜರ್ ಆಂಡ ತಿಕ್ಕಡ್"(ಓ ಸೀನ, ವೇಗವಾಗಿ ಹೋಗು, ಮೆಲ್ಕಾರ್ ನ ಪ್ರಯಾಣಿಕರಾದರೂ ಸಿಗಲಿ) ಕಂಡಕ್ಟರ್ ಜಗ್ಗ ಕೂಗಿದ. ನಾನು ಇನ್ನೊಂದು ಪ್ಯಾಕೆಟ್ ಗುಟ್ಕಾ ಏರಿಸಿ Accelerator ಒತ್ತಿದೆ. ಬಸ್ಸು ಕಲ್ಲಡ್ಕ ನಿಲ್ದಾಣ ದಾಟಿ ಚರ್ಚ್ ಕ್ರಾಸ್ ತಲುಪಿದಾಗ ಹುಡುಗಿಯೊಬ್ಬಳು ಕೈ ತೋರಿಸಿದಳು. ’ಎಡ್ಡೆ ಫಿಗರ್’ ಎಂದು ಮನಸ್ಸಲ್ಲೇ ಅಂದುಕೊಂಡು ಬ್ರೇಕ್ ಒತ್ತಿದೆ. ಅವಳೊಂದಿಗೆ ಇನ್ನೂ ಇಬ್ಬರು ಹುಡುಗಿಯರು ಹತ್ತಿದರು. ’ಬೇಕ..ಬೇಕ.. ರೈಟ್’ ಜಗ್ಗ ಕೂಗಿದ. ಬಸ್ಸು ಮುನ್ನಡೆಯಿತು. ನಾನು ಅಪ್ರಯತ್ನವಾಗಿ ಕನ್ನಡಿಯಲ್ಲಿ ಅವಳನ್ನೊಮ್ಮೆ ನೋಡಿದೆ.. ಕಾಕತಾಳೀಯವೆಂಬಂತೆ ಅವಳೂ ಅದೇ ಕ್ಷಣದಲ್ಲಿ ನನ್ನನ್ನು ನೋಡಿದ್ದಳು.. ತಟ್ಟನೆ ದೃಷ್ಟಿ ತಿರುಗಿಸಿ ಕಿಟಕಿಯಾಚೆ ನೋಡತೊಡಗಿದಳು. ಮುಖದಲ್ಲಿ ಅದ್ಯಾವುದೋ ಅವ್ಯಕ್ತ ಭಾವ.. ಅದು ನಾಚಿಕೆಯೋ..,ಚಡಪಡಿಕೆಯೋ ಅಥವಾ ಸಂತಸವೋ ತಿಳಿಯುತ್ತಿರಲಿಲ್ಲ.. ಅಲ್ಲಿ ಕೋಪವಂತೂ ಇರಲಿಲ್ಲ.. ಹೀಗೆ ನನ್ನ ಜೀವನದಲ್ಲಿ ಮೊದಲ ತಂಗಾಳಿ ಬೀಸಿತ್ತು.. ಏನಿದ್ದಿರಬಹುದು ಅವಳ ಮನಸ್ಸಿನಲ್ಲಿ..? ಪ್ರೀತಿ..?! ಹೀಗೆ ಯಾವುದೋ ದಿಕ್ಕಿನಲ್ಲಿ ಸಾಗುತ್ತಿದ್ದ ನನ್ನ ಯೋಚನಾ ಲಹರಿ, ವಿಟ್ಲದ ಬಸ್ಸು ನನ್ನನ್ನು ಓವರ್ ಟೇಕ್ ಮಾಡಿ ಹೋದಾಗ ಸರಿದಾರಿಗೆ ಬಂತು. " ಮೆಲ್ಕಾರ್ ತ ಪೋಂಡ್, B.C Road ಟ್ ಆಂಡ 10 ಸೀಟ್ ಪಾಡೊಡ್..!" ( ಮೆಲ್ಕಾರ್ ನ ಪ್ರಯಾಣಿಕರೂ ಹೋದರು, B.C Road ನಲ್ಲಾದರೂ 10 ಸೀಟು ಹಾಕಬೇಕು!) ಜಗ್ಗ ಗೊಣಗಿದ. ನನಗೆ ಅವಮಾನವಾದಂತಾಗಿ ತುಸು ಸಿಟ್ಟಿನಿಂದಲೇ ಬಸ್ಸನ್ನು ವೇಗವಾಗಿ ಚಲಾಯಿಸತೊಡಗಿದೆ.
                                            *****
ನಾನು ಹತ್ತನೇ ತರಗತಿಯಲ್ಲಿ ಮೂರನೇ ಯತ್ನದಲ್ಲಿ ಎಲ್ಲಾ ವಿಷಯಗಳನ್ನು ಪಾಸು ಮಾಡಿದರೂ ಗಣಿತದಲ್ಲಿ ಮತ್ತೆ ಫೇಲಾಗಿದ್ದೆ. ಅದೇನೇ ಮಾಡಿದರೂ ಲೆಕ್ಕ ತಲೆಗೆ ಹತ್ತುತ್ತಿರಲಿಲ್ಲ. ಅಪ್ಪ ಸಿಟ್ಟಿನಿಂದ ಬೆನ್ನಿಗೆರಡು ಬಾರಿಸಿ ಭಟ್ಟರ ಬಸ್ಸಿನಲ್ಲಿ ಕ್ಲೀನರ್ ಕೆಲಸ ಕೊಡಿಸಿದ್ದ. ಅವನೂ ಕೂಡ ಭಟ್ಟರ ಮಂಗಳೂರು-ಮಣಿಪಾಲ ಬಸ್ಸಿನಲ್ಲಿ ಡ್ರೈವರ್ ಆಗಿದ್ದ. ಒಂದು ವರ್ಷ ಕೆಲಸ ಮಾಡಿ ಭಡ್ತಿ ಪಡೆದು ನನಗೆ ಡ್ರೈವರ್ ಕೆಲಸ ಸಿಕ್ಕಿತ್ತು. ಮೊದಲಿಗೆ ಕೆಲಸ ಖುಷಿ ಕೊಟ್ಟರೂ ಕ್ರಮೇಣ ನೀರಸತೆ ಆವರಿಸಿತ್ತು.
                                            *****

ಜಗ್ಗನನ್ನು ಗದರಿಸಿ ಅವಳಿಗೆ C (Concession) ಕೊಡಿಸಿ ದಿನವೂ ಅವಳು ನಮ್ಮ ಬಸ್ಸಲ್ಲೇ ಬರುವಂತೆ ವ್ಯವಸ್ಥೆ ಮಾಡಿದ್ದೆ. ದಿನವೂ ಅವಳು ಚರ್ಚ್ ಕ್ರಾಸಲ್ಲಿ ಬಸ್ಸು ಹತ್ತಿ, ಸಹ್ಯಾದ್ರಿ ಕಾಲೇಜಿನ ಬಳಿ ಇಳಿಯುತ್ತಿದ್ದಳು. ಅವರ ಮಾತುಗಳಿಂದ ಅವಳ ಹೆಸರು ಮಧುರ ಎಂದು ಗೊತ್ತಾಗಿತ್ತು. ನಿಜಕ್ಕೂ ಹೆಸರಿಗಿಂತಲೂ ಹೆಚ್ಚು ಮಧುರವಾಗಿದ್ದಳು ಅವಳು. ಅವಳು ಒಂದು ದಿನ ಬಾರದಿದ್ದರೂ ಏನೋ ಕಳಕೊಂಡ ಅನುಭವವಾಗುತ್ತಿತ್ತು. ಅವಳ ಮುದ್ದು ಮುಖವನ್ನು ಮತ್ತೆ ಮತ್ತೆ ನೋಡಬೇಕೆಂದೆನಿಸುತ್ತಿತ್ತು. B.C Roadನವರೆಗೂ ಅವಳನ್ನು ನಿರ್ಭಯವಾಗಿ ನೋಡಬಹುದಿತ್ತು, ಅಲ್ಲಿ ಮಹಿಳಾ ಸಂಘದ ದಢೂತಿ ಹೆಂಗಸು ಹತ್ತುತ್ತಿದ್ದರಿಂದ ಮುಂದೆ ಜಾಗ್ರತೆಯಿಂದ ಕದ್ದು ನೋಡಬೇಕಾಗಿತ್ತು.
ನಮ್ಮಿಬ್ಬರ ಕಣ್ಣುಗಳು ಕಲೆತಾಗ, ನನ್ನ ಹೃದಯಬಡಿತ ಸ್ಪೀಡೋಮೀಟರ್ ನೊಂದಿಗೆ ಸ್ಪರ್ಧೆಗಿಳಿಯುತ್ತಿತ್ತು. ಶಕ್ತಿಯಲ್ಲಿ ಎರಡು ವಿಧಗಳಂತೆ, . ಪ್ರಚ್ಛನ್ನ ಶಕ್ತಿ (Potential Energy) . ಚಲನ ಶಕ್ತಿ (Kinetic Energy). ಹೀಗೆ ಹೇಳಿದವನು ಪ್ರೇಮಿಯಾಗಿದ್ದರೆ ಬಹುಶಃ ಆತನಿಗೆ ಮೂರನೇ ವಿಧವೂ ಕಂಡುಬರುತ್ತಿತ್ತು. ಹುಡುಗಿಯ ಕಂಗಳಲ್ಲಿ ಹಾಗೂ ನಗುವಿನಲ್ಲಿರುವ ಸೆಳೆತ ಯಾವ ಗುರುತ್ವಾಕರ್ಷಣೆಗೂ ಕಮ್ಮಿಯಿಲ್ಲ.. ಅದೇ ಶಕ್ತಿಯಿಂದ ನಾನಿವತ್ತು ಜೀವಿಸುತ್ತಿದ್ದೆ.
ಜಗ್ಗ ಒಮ್ಮೆ ಕೇಳಿದ್ದ "ದಾನೆಂಬೆ ಸೀನ, ಲೈನ್ ಪಾಡೊಂದ್ ಉಲ್ಲನಾ ಆ ಪೊಣ್ಣುಗ್?" (ಯಾಕೋ ಸೀನ, ಲೈನು ಹೊಡೆಯುತ್ತಿದ್ದೀಯ ಆ ಹುಡುಗಿಗೆ?) "ಬೇವರ್ಸಿ! ಲೈನ್ ಅತ್ತ್ ಯಾ, ಲವ್ ಮಲ್ತೊಂದ್ ಉಲ್ಲೆ!"( ಲೈನ್ ಅಲ್ಲಾ ಕಣೋ, ಲವ್ ಮಾಡ್ತಿದ್ದೀನಿ!) "ದಾದ ಲವ್ವಾ? ನಿಕ್ಕ್ ದಾನೆ ಮರ್ಲಾ? SLCಟ್ ಮೂಜಿ ಸಾರಿ ಕುಲ್ಲ್ ನಾಯೆ, ಆಲ್ ತೂಂಡ ಬರೀ ಇಂಗ್ಲೀಸ್ ಬುಡ್ಪುನಾಲ್, ಎಂಚಿನ ಲವ್ವುಯಾ ಸಾವು! ಆಳೆನ್ ಮರೆಪ್ಪು"( ಏನು ಲವ್ವಾ? ನಿನಗೇನು ಹುಚ್ಚು ಹಿಡಿದಿದೆಯೇ? ನೀನು SSLCಯಲ್ಲಿ ಫೇಲಾದವನು, ಅವಳು ನೋಡಿದರೆ ಬರೇ ಇಂಗ್ಲೀಷ್ ನಲ್ಲೇ ಮಾತನಾಡುತ್ತಾಳೆ, ಇದ್ಯಾವ ಲವ್ ಕರ್ಮ! ಅವಳನ್ನು ಮರೆತುಬಿಡು) ಜಗ್ಗ ಬುದ್ಧಿ ಹೇಳಿದ್ದ. ಆದರೆ ನಾನದನ್ನು ಕಿವಿಗೇ ಹಾಕಿಕೊಂಡಿರಲಿಲ್ಲ. ಫೇಲಾದವನಿಗೂ ಹೃದಯವಿರುವುದಿಲ್ಲವೇ? ಮೆದುಳಲ್ಲಿ ಲೋಪವಿರಬಹುದು, ಆದರೆ ಹೃದಯದಲ್ಲೂ ಲೋಪವಿದೆಯೆಂದು ಹೇಳಲು ಸಾಧ್ಯವೇ?
ಹೀಗೆ ವರ್ಷವೊಂದು ಉರುಳಿತ್ತು. ಈಗೀಗ ಮಧುರ ಬಸ್ಸೇರಿದ ಬಳಿಕ ನನ್ನನ್ನು ನೋಡಿ ಪರಿಚಯದ ನಗು ಬೀರುತ್ತಿದ್ದಳು. ಅವಳ ಬಳಿ ಮಾತನಾಡಬೇಕೆಂದು ಹಲವು ಬಾರಿ ಅಂದುಕೊಂಡಿದ್ದರೂ ಧೈರ್ಯ ಸಾಲುತ್ತಿರಲಿಲ್ಲ. ’ನನಲ ದಿನ ಉಂಡತ್ತ’ ಎಂದುಕೊಂಡು ಸುಮ್ಮನಾಗುತ್ತಿದ್ದೆ. ಕನಸುಗಳಿಗೆ ಮಾತ್ರ ಮಿತಿ ಇರಲಿಲ್ಲ. ಈ ’ಡ್ರೈ’ ವರನಿಗೆ ಇಂಗ್ಲೀಷ್ ವಧು! ವಿಚಿತ್ರವಾದರೂ ನನಗದು ವಿಶೇಷವೆನಿಸುತ್ತಿತ್ತು.
ಅದೊಂದು ಶುಕ್ರವಾರ ಅವಳಿಗೆ ಪ್ರಪೋಸ್ ಮಾಡಲೇಬೇಕೆಂದು ದೃಢ ನಿರ್ಧಾರ ಮಾಡಿದ್ದೆ. ಎಂದಿನ ಚರ್ಚ್ ಕ್ರಾಸ್ ತಲುಪಿದಾಗ ಅವಳಾಗಲಿ, ಅವಳ ಗೆಳತಿಯರದ್ದಗಲಿ ಪತ್ತೆ ಇರಲಿಲ್ಲ. ಆ ದಿನ ಹೇಗೋ ಕಷ್ಟದಿಂದ ಕಳೆದು, ಮರುದಿನ ಆ ಕೆಲಸ ಮಾಡಬೇಕೆಂದು ರಾತ್ರಿಯೆಲ್ಲಾ ರಿಹರ್ಸಲ್ ಮಾಡಿದರೂ, ಮರುದಿನವೂ ಅವಳು ಬಂದಿರಲಿಲ್ಲ. ಹೀಗೆ ಹತ್ತು ದಿನಗಳು ಕಳೆದವು. ಈ ಹತ್ತೂ ದಿನಗಳನ್ನು ಅವಳ ಮುಖ ನೋಡದೆ ಹೇಗೆ ಕಳೆದೆನೆಂದು ಇಲ್ಲಿ ವಿವರಿಸಲು ಸಾಧ್ಯವಿಲ್ಲ. ಅಂತೂ ಹನ್ನೊಂದನೇ ದಿನ ಅವಳು ಬಂದಳು. ಗಿಳಿ ಹಸಿರು ಬಣ್ಣದ ಚೂಡಿದಾರದಲ್ಲಿ ಎಂದಿಗಿಂತ ಮುದ್ದಾಗಿ ಕಾಣುತ್ತಿದ್ದಳು.
ಮದರಂಗಿ ಶುಭಸೂಚಕವಂತೆ.., ಆದರೆ ಬಸ್ಸೇರಿದವಳ ಕೈಯಲ್ಲಿ ಕಂಡ ಮದರಂಗಿ ನನ್ನ ಪಾಲಿಗೆ ಶುಭಸೂಚಕವಾಗಿರಲಿಲ್ಲ.. ಮನಸ್ಸೇಕೋ ಕೇಡನ್ನು ಶಂಕಿಸಿತ್ತು.. ನನ್ನ ಕಂಗಳು ಅಪ್ರಯತ್ನವಾಗಿ ಎಂದೂ ನೋಡದ ಅವಳ ಎದೆಯೆಡೆಗೆ ತಿರುಗಿದ್ದವು.. ಅಲ್ಲಿ ಕರಿಮಣಿ ನೇತಾಡುತ್ತಿತ್ತು..ಮೆದುಳಿಗೆ ಲೋಪ ಮಾಡಿದ ಭಗವಂತ ಹೃದಯಕ್ಕೆ ಚೂರಿಯನ್ನೇ ಹಾಕಿದ್ದ.. ಹೃದಯ ಒಡೆದು ಚೂರುಚೂರಾಗಿತ್ತು.. ಮಂಜಾದ ಕಂಗಳಿಂದ ರಸ್ತೆ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು.. ಆ ಹಳೆಯ ಕೆಂಪು ಬಸ್ಸು ನನ್ನನ್ನು ಓವರ್ ಟೇಕ್ ಮಾಡಿ ಮುಂದಕ್ಕೆ ಚಲಿಸಿತ್ತು..
                                       *****

ಬರ ಬಂದ ಭೂಮಿಗೆ ಮಳೆ ಹನಿ ಬಿದ್ದಂತೆ
ಬರಡಾದ ಮನಸಿಗೆ ತಂಪನ್ನು ತಂದಳು..
ಹೃದಯದೊಳಗಿಳಿದು ಈಜಿ ದಡ ಸೇರುವ ಮುನ್ನವೇ
ಮರೀಚಿಕೆಯಾಗಿ ಹೋದಳು.. ಮಧುರ
ಮರೀಚಿಕೆಯಾಗಿ ಹೋದಳು..
                                       *****

ಧನಂಜಯ ಕುಮಾರ್
೮ನೇ ಸೆಮಿಸ್ಟರ್
ವಿದ್ಯುನ್ಮಾನ ಹಾಗೂ ಸಂವಹನ ವಿಭಾಗ,
RVCE.


Tuesday, 1 May 2018

ಲೈಫು ಇಷ್ಟೇನಾ?? Tales of Engg Fests

ಅಂತೂ ಇಂತೂ ಬೆಂಗಳೂರೆಂಬ ಮಾಯಾನಗರಿಗೆ ಬಂದು 3 ವರ್ಷಗಳಾಗುತ್ತಾ ಬಂತು.  ಏನು ನೋಡಿದ್ಯಪ್ಪಾ ಬೆಂಗ್ಳೂರಲ್ಲಿ ಎಂದು ಯಾರಾದರು ಕೇಳಿದರೆ ಏನು ಹೇಳಬಹುದು? ಪಂಚರಂಗಿ ಸ್ಟೈಲ್ ನಲ್ಲಿ ಉತ್ತರಿಸುವುದಾದರೆ, ಕ್ವಿಝ್ ಗಳು, ಟೆಸ್ಟುಗಳು, ಕ್ಲಾಸ್ ರೂಮ್ ಕೊರೆತಗಳು, ವಾಹನಗಳ ಮೊರೆತಗಳು, ಎತ್ತನೋಡಿದರತ್ತ ಬಿಮ್ ಟಿಸಿಗಳು, ಬಿಲ್ಡಿಂಗುಗಳು ಹಾಗೂ ಬೀದಿನಾಯಿಗಳು.... ಜೊತೆಜೊತೆಗೆ ಬಗೆಬಗೆಯ ಜೀನ್ಸುಗಳು ಹಾಗೂ ಅವುಗಳಿಗೊಪ್ಪುವ ಹಿಂಗ್ಲೀಷುಗಳು... ಅಯ್ಯೋ..! ಸಾಕಪ್ಪಾ.., ಎಲ್ಲಾ ನೋಡುತ್ತ್ತಾ ಹೋದರೆ ಇಷ್ಟೇನಾ ಲೈಫು ಎನಿಸಿಬಿಡುತ್ತದೆ.

ರೀ, ನಿಜವಾಗ್ಲೂ ನಾವು ಒಂದು ಮಾತು ನೆನಪಿಟ್ಕೋಬೇಕು ಕಣ್ರೀ..., ಪರೀಕ್ಷೆಗಳಲ್ಲಿ  ಪ್ರಾಮಾಣಿಕವಾಗಿ ಬರೆದು ಕಡಿಮೆ ಅಂಕ ಬಂದರೆ ಅಧ್ಯಾಪಕರ ಬಾಯಿಗೆ ಆಹಾರವಾಗಬೇಕಾಗುತ್ತೆ, ಸುಮ್ನೆ ನಕಲು ಮಾಡಿ ಬರೆಯುವವರು ಆರಾಮವಾಗಿ ಬರೆದು ಅಧ್ಯಾಪಕರ ಹೊಗಳಿಕೆಗೆ ಪಾತ್ರವಾಗುವುದು ಕಂಡಾಗ ಲೈಫು ಇಷ್ಟೇನೇಎಂದು ಸುಮ್ಮನಾಗುವುದು ಬಿಟ್ಟು ಇನ್ನೇನೂ ಮಾಡಲು ಸಾಧ್ಯವಿಲ್ಲ. ಕೆಲವರು ಹೇಳಬಹುದು " its knowledge which is important, and not marks". ಈ ಮಾತುಗಳು ನಿಜವೇ ಆಗಿದ್ದರೂ ಒಂದು ಮಾತಂತು ಸತ್ಯ, ಇಂದು ಎಲ್ಲಾ ಆಯ್ಕೆಗಳು purely knowledge based ಆಗಿದ್ದರೆ ಬಹುಶಃ ’influence' ಹಾಗೂ ಭ್ರಷ್ಟಾಚಾರಮೊದಲಾದ ಪದಗಳು ಪದಕೋಶಗಳಲ್ಲೇ ಇರುತ್ತಿರಲಿಲ್ಲ ಅಲ್ಲವೇ?

ತಿಂಗಳಿಗೊಮ್ಮೆ ಬರುವ ಟೇಸ್ಟ್ ಇಲ್ಲದ ಟೆಸ್ಟುಗಳು,   festu ಗಳು, ಎಲೆಕ್ಷನ್ ಗಳು ಹಾಗೂ ಸರಕಾರಿ ಸೆಲೆಕ್ಷನ್ ಗಳು.... ಕನ್ನಡ ಕಾರ್ಯಕ್ರಮಗಳಲ್ಲಿ ಮಿಂಚಿ ಹೊರ ಬಂದ ಬಳಿಕ ಕನ್ನಡ ಬಿಟ್ಟು ಇನ್ನೆಲ್ಲಾ ಭಾಷೆಯ ಚಲನಚಿತ್ರಗಳನ್ನು ನೋಡುವ  great  ಕನ್ ಡಾಪ್ರೇಮಿಗಳು..., ಕಾಲೇಜಿಗೆ ಬಂದ ಕೂಡಲೇ ಅದ್ಯಾವ ಹಾರ್ಮೋನಿನ ಪರಿಣಾಮವೋ ತಿಳಿಯದೆ ಬರೀ ಇಂಗ್ಲೀಷಿನಲ್ಲಿ ಮಾತ್ರ ಮಾತನಾಡುವ ಲಲನಾಮಣಿಗಳು.., ಟಿ. ವಿ ಆನ್ ಮಾಡಿದರೆ ರಿಯಾಲಿಟಿ ಬಿಟ್ಟು ಇನ್ನೆಲ್ಲವೂ ಇರುವ ರಿಯಾಲಿಟಿ ಶೋಗಳು.., ಈ ಕಾಲದಲ್ಲಿ ಗ್ರಾಮರ್ಗಿಂತ ಗ್ಲಾಮರ್ ಮುಖ್ಯವೆಂಬ ಭ್ರಮೆಯಲ್ಲಿರುವ ಹಲವು ವ್ಯಕ್ತಿತ್ವಗಳು....
ಹೀಗೆ ಹೇಳುತ್ತಾ ಹೋದರೆ ಮುಗಿಯೋದೇ ಇಲ್ಲ ಕಣ್ರೀ... ಇಲ್ಲಿನ ಲೈಫೇ ಹಿಂಗೆ.. ನೀರಿಳಿಯದ ಗಂಟಲೊಳ್ ಬರ್ಗರ್, ಪಿಜ್ಜಾ ತುರುಕಿದಂತೆ..!!

ಇಷ್ಟಕ್ಕೂ ನಾವು ನಮ್ಮ ಭಾಷೆಯನ್ನು ಮಾತ್ರ ಬಳಸಬೇಕು, ಬೇರೆ ಭಾಷೆಯನ್ನು ಬಳಸಲೇಬಾರದೆಂಬ ತಮಿಳುವಾದ ನಮಗೆ ಬೇಕಿಲ್ಲ.. ಕನ್ನಡ  ಬಾವಿಯೊಳಗಿನ ಕಪ್ಪೆಯಾಗುವುದು ಬೇಡ.. ನಾವು ಬೇರೆ ಭಾಷೆಗಳನ್ನೂ ಕಲಿಯಬೇಕು.., ನಮಗೆ ಮುಂದುವರೆದ ಸಂಸ್ಕೃತಿಗಳ ಪರಿಚಯವೂ ಇರಬೇಕು.. ಏಕೆಂದರೆ ಸಂವಹನದಿಂದ ಮಾತ್ರ ಭಾಷೆ, ಸಂಸ್ಕೃತಿಗಳ ಬೆಳವಣಿಗೆ ಸಾಧ್ಯ. ಆದರೆ ಇವೆಲ್ಲದರ ನಡುವೆ ನಾವು ನಮ್ಮತನವನ್ನು ಉಳಿಸಿಕೊಳ್ಳಬೇಕು. ಮುತ್ತು ಕೊಡುವವರು ಬಂದಾಗ ತುತ್ತು ಕೊಟ್ಟ ಕನ್ನಡ ಭಾಷೆಯನ್ನು ಮರೆಯಬಾರದಲ್ಲವೇ? ಆದರೆ ಇವೆಲ್ಲಾ ನಮ್ಮ ಕನ್ನಡ  ಕಂದಮ್ಮಗಳಿಗೆ ತಿಳಿಯುವುದಾದರೂ ಹೇಗೆ? ನಮ್ಮ festuಗಳು ಕೇವಲ ಮನೋರಂಜನೆಯನ್ನಷ್ಟೇ ಕೇಂದ್ರೀಕರಿಸದೆ ಈ ನಿಟ್ಟಿನಲ್ಲೂ ಯೋಚಿಸಬೇಕೆಂದೆನಿಸುವುದಿಲ್ಲವೇ?
ಪ್ರಪಂಚ ಕೆಟ್ಟು ಹೋಗಿದೆ ಕಣ್ರಿ… ಇಲ್ಲಿ ಕಾಸಿದ್ದೋನೇ ಬಾಸು... ಬಡವರಿಗೆ ಏನಿದ್ದರೂ ದೇವರೇ ಗತಿ..( ಕ್ಷಮಿಸಿ, ಬಡತನವೇ ಗತಿ!)  ಹಾಗೆಂದು ಪ್ರತಿಭಾವಂತರಿಗೆ ಇದು ಕಾಲವೇ ಅಲ್ಲವೆಂದೇನಲ್ಲ.. ಪ್ರತಿಭೆಯ ಜೊತೆಗೆ ಬುಧ್ಧಿವಂತಿಕೆ ಇರುವವರು ಇಲ್ಲಿ ಬದುಕಬಹುದು.

ಕೊನೆಯದಾಗಿ, ಹಲವರಿಗೆ ಈ ಲೇಖನದಲ್ಲಿ ಋಣಾತ್ಮಕ ಅಂಶಗಳಿವೆ ಎಂದನಿಸಬಹುದು. ಒಂದು ಲೋಟದಲ್ಲಿ ಅರ್ಧ ನೀರಿದ್ದರೆ, ಲೋಟವು ಅರ್ಧ ಖಾಲಿಯಾಗಿದೆ ಎನ್ನುವುದಕ್ಕಿಂತ ಲೋಟವು ಅರ್ಧ ತುಂಬಿದೆ( Positive thinking) ಎನ್ನಬೇಕು ನಿಜ. ಆದರೆ ಖಾಲಿ ಲೋಟದಲ್ಲಿ ಸೊನ್ನೆ ನೀರಿದೆ ಎಂದು ಹೇಳಲು ಸಾಧ್ಯವೇ?? 

ಬಿಡ್ರೀ.., ಲೈಫು ಹಿಂಗೇನೇ....!!

Dhananjay
3rd Year E&C
RVCE
(14/04/2011)

#Honeyಗವನ 5

ಇಂದಿನ ಪದ: ನೆನೆ